ಗ್ರೀಕ್ ನಾಟಕಗಳು (ಪ್ರಾಚೀನ) -
ಪ್ರಾಚೀನ ಗ್ರೀಕ್ ನಾಟಕಾಲಯದ ಮತ್ತು ನಾಟಕಗಳ ಅಭಿಮಾನದೇವತೆ ಡೈಯೊನೈಸಸ್. ಕೆಲವು ಮುಖ್ಯ ಗ್ರಾಮಗಳಲ್ಲೂ ಆಥೆನ್ಸ್ ಮುಂತಾದ ನಗರಗಳಲ್ಲೂ ಆತನ ಹೆಸರಿನಲ್ಲಿ ಶೀತಕಾಲದಿಂದ ವಸಂತ ಸಮಯದತನಕ ಹಲವು ಸಣ್ಣ ದೊಡ್ಡ ಉತ್ಸವಗಳು ಜರುಗುತ್ತಿದ್ದವು. ಆರಾಧನಾ ಪ್ರಕ್ರಿಯೆಯ ಜೊತೆಗೆ ನರ್ತನಸಹಿತ ಗೀತ ಹಾಡುವುದೇ ಉತ್ಸವಕ್ಕೆ ಸಾರ್ವಜನಿಕರ ಕಾಣಿಕೆ. ನೃತ್ಯಮೇಳಕ್ಕೆ ಡಿಥಿರ್ಯಾಂಬ್ (ಆವೇಶಕುಣಿತ) ಎಂದು ಅಂಕಿತ. ಅದರ ವಿಷಯ ಡೈಯೊನೈಸಸ್ಸನ ಕಷ್ಟಸುಖಮಿಶ್ರಿತ ಜೀವನದ ಘಟನಾವಳಿ. ನೃತ್ಯ ಮೇಳದಲ್ಲಿ ಐವತ್ತು ಮಂದಿ, ಡೈಯೊನೈಸಸ್ಸನ ಪರಿವಾರದವರಾದ ಸ್ಯಾಟಿರೈ ಮತ್ತು ಸೈಲಿನೈಗಳಂತೆ ವೇಷ ಧರಿಸಿ ಭಾಗವಹಿಸುತ್ತಿದ್ದರು. ಒಳ್ಳೆಯ ಗೀತೆಗಳನ್ನು ಕಟ್ಟಿಕೊಟ್ಟು ಹೆಸರುಗೊಂಡ ಏರಿಯನ್ ನಾಟ್ಯದ ಮಧ್ಯೆ ಮಧ್ಯೆ ಬಳಸುವುದಕ್ಕಾಗಿ ಸಂಭಾಷಣಾ ಪದ್ಯ ಪಂಕ್ತಿಗಳನ್ನು ತಂದು ಸೇರಿಸಿದ. ಅದನ್ನು ನಾಟಕತೆಯ ಪ್ರಥಮ ಪ್ರವೇಶ ಎನ್ನಬಹುದು. ಆಮೇಲೆ ಬಂದ ಥೆಸ್ಪಿಸ್ ಐವತ್ತು ನರ್ತಕರ ಎದುರಿಗೆ ಒಬ್ಬ ನಟನನ್ನು (ಹೈಪೊಕ್ರಿಟೀಸ್ - ಉತ್ತರ ಹೇಳುವವ) ತಂದಿರಿಸಿ, ಕಥನಮಯವಾಗಿದ್ದ ನೃತ್ಯಗೀತವನ್ನು ಕಥಾಭಿನಯಕ್ಕೆ ತಿರುಗಿಸಿ, ನಾಟಕದ ನಿಜಸ್ಥಾಪಕನಾದ. ಸಂವಾದಕ್ಕೆ ಸ್ವಲ್ಪ ಗಮನವೂ ಪ್ರಶಸ್ತಿಯೂ ದೊರಕಿದರೂ ನೃತ್ಯಗೀತ (ಕೋರಸ್, ಮೇಳಗೀತ) ತನ್ನ ಮುಖ್ಯಪ್ರಭಾವವನ್ನು ಉಳಿಸಿಕೊಂಡೇ ಇತ್ತು. ಈಸ್ಕಿಲಸ್ (ನೋಡಿ- ಈಸ್ಕಿಲಸ್) ಎರಡನೆಯ ನಟನನ್ನು ತಂದು ಸೇರಿಸಿದ ಅನಂತರವೂ ಅದು ಕುಗ್ಗಲಿಲ್ಲ. ಗಂಭೀರವಾಗಲಿ ವಿನೋದವಾಗಲಿ ಲೇವಡಿಯಾಗಲಿ ಎಲ್ಲ ಬಗೆಯ ನಾಟಕಕ್ಕೂ ಕೋರಸ್ ಎಂಬ ನಾಮಧೇಯವೇ ಬಲುಕಾಲ ಸಲ್ಲುತ್ತಿತ್ತು. ಟ್ರ್ಯಾಜೆಡಿ ಕಾಮೆಡಿ ಸ್ಯಾಟಿರ್ ನಾಟಕಗಳ ಉಚ್ಛ್ರಾಯ ಸಮಯದಲ್ಲೂ ಕವಿಗೆ ತನ್ನ ರೂಪಕಗಳನ್ನು ಪ್ರದರ್ಶಿಸಲು ಅಪ್ಪಣೆಯೀಯುವ ರಹದಾರಿಗೆ `ಅವನಿಗೊಂದು ಕೋರಸ್ ಕೊಟ್ಟರು` (ಹಿ ವಾಸ್ ಗಿವನ್ ಎ ಕೋರಸ್) ಎಂಬ ನಿರೂಪಣೆ ಇರುತ್ತಿತ್ತು. ಪ್ರದರ್ಶನಾಧಿಕಾರಿ ಕವಿಗೆ ನಿನ್ನ ಟ್ರ್ಯಾಜಡಿ ಅಥವಾ ಕಾಮೆಡಿ ಶುರುವಾಗಲಿ ಎನ್ನುವುದರ ಬದಲು ನಿನ್ನ ಕೋರಸ್ ಪ್ರವೇಶಿಸಲಿ ಎನ್ನುತ್ತಿದ್ದ. ಈಸ್ಕಿಲಸ್ಸನ ಸುಧಾರಣೆಯನ್ನು ಮುಂದುವರಿಸಿ ಸಾಫೊಕ್ಲೀಸ್ ಮೂರನೆಯ ನಟನನ್ನು ತಂದು ಕೂಡಿಸಿದ ಮೇಲೂ ನೃತ್ಯಗೀತವಿಲ್ಲದೆ ನಾಟಕ ನಡೆಯುವಂತಿರಲಿಲ್ಲ.

	ಡೈಯೊನೈಸಸ್ ಪೂಜೆಯ ಅಂಗವಾದ ನೃತ್ಯಗೀತ ಬಹುಶಃ ಒಂದೇ ಬಗೆಯದಾಗಿರದೆ ಹಲವು ವಿಧದ ಭಾವ ಭಾವನೆಗಳನ್ನು ಪ್ರಕಟಿಸುವ ಸಾಮೂಹಿಕ ಸಾಧನವಾಗಿತ್ತು. ಕೆಲವು ವೇಳೆ ಕೋಪ, ಮರುಕ, ಭಯ, ವಿಸ್ಮಯ ಮೊದಲಾದ ಗಂಭೀರರಾಗವೂ ಮತ್ತೆ ಕೆಲವು ವೇಳೆ ಪರಿಹಾಸ ಸಮ್ಮೋದ ವಿಡಂಬನ ನಗು ಗೇಲಿ ಮುಂತಾದ ಹಗುರ ರಾಗವೂ ಅದರಲ್ಲಿ ತುಂಬಿರುತ್ತಿತ್ತು. ಭಾವಗಳ ಮಿಶ್ರಣ ತೋರಿಬರುತ್ತಿದ್ದದ್ದೂ ಉಂಟು. ಕ್ರಮೇಣ ನೃತ್ಯಗೀತ ಕವಲೊಡೆದು ಮೂರು ಮುಖ್ಯ ಪ್ರಕಾರದ ನಾಟಕಗಳ ಉತ್ಪತ್ತಿಗೆ ಕಾರಣವಾಯಿತು; ಗಂಭೀರ ನಾಟಕ(ಟ್ರ್ಯಾಜಿಡಿ), ಹರ್ಷನಾಟಕ (ಕಾಮೆಡಿ), ಮಿಶ್ರನಾಟಕ (ಸ್ಯಾಟಿರ್ ಪ್ಲೇ). ಅವು ಮೂರಕ್ಕೂ ತಮ್ಮತಮ್ಮದೇ ಆದ ವಿಕಾಸ, ಚರಿತ್ರೆ, ಸಾರ್ಥಕತೆ, ಒದಗಿ ಬಂದದ್ದು ನ್ಯಾಯವೇ.

	1 ಗಂಭೀರನಾಟಕ: ಟ್ರ್ಯಾಜೆಡಿ ಅರ್ಥಾತ್ ಗ್ರೀಕ್ ಭಾಷೆಯ ಟ್ರ್ಯಾಜೆಡಿಯ ಎದ್ದುಬಂದದ್ದು ಅದೇ ಭಾಷೆಯ ಟ್ರ್ಯಾಗಡಾಯ್ ಎಂಬ ಪದದಿಂದ. ಟ್ರ್ಯಾಗಡಾಯ್ ಎಂದರೆ ಪ್ರಾಯಶಃ ಹೋತನಂತೆ ವೇಷ ಹಾಕಿಕೊಂಡು ಡೈಯೊನೈಸಸ್ಸನ ಹಿಂಬಾಲಕರಾದ ಸ್ಯಾಟಿರ್ ತಂಡ ತಾವೆಂದು ನಟಿಸುತ್ತ, ನೃತ್ಯಗೀತದಲ್ಲಿ ಭಾಗವಹಿಸುತ್ತಿದ್ದವರು; ಅಥವಾ ಒಂದು ಹೋತದ ಬಹುಮಾನಕ್ಕಾಗಿ ನರ್ತಿಸುತ್ತಿದ್ದ ಗುಂಪು; ಅಥವಾ ಡೈಯೊನೈಸಸ್ಸನ ಬಲಿ ಪೀಠದಲ್ಲಿ ಹೊಯ್ದು ಕೆಡವಿದ ಹೋತನ ಸುತ್ತ ಭಯಭಕ್ತಿಯಿಂದ ನರ್ತಿಸುತಿದ್ದವರು. ಹೀಗೇ ಎಂದು ಹೇಳವುದು ಸಾಧ್ಯವಿಲ್ಲ. ಒಬಬಿಬ್ಬರು ವಿದ್ವಾಂಸರಂತೂ ಗಂಭೀರನಾಟಕಕ್ಕೂ ಹೋತಕ್ಕೂ ಏನೇನೂ ಸಂಬಂಧ ಇಲ್ಲವೆಂದು ಹೇಳಿದ್ದಾರೆ; ಏತಕ್ಕೆಂದರೆ, ಟ್ರ್ಯಾಜೆಡಿ ಎಂಬ ಪದ ಅರ್ಥವತ್ತಾಗಿ ಪ್ರಭಾವಯುಕ್ತವಾಗಿ ಬಳಕೆಗೆ ಬರುವ ಹೊತ್ತಿಗಾಗಲೆ ಏರಿಯನ್, ಥೆಸ್ಪಿಸ್, ಅಳಿದು ಹಲವು ದಶಕ ಕಳೆದು ಹೋಗಿದ್ದುವು; ನಾಟಕದ ಸ್ವರೂಪವೂ ನೃತ್ಯಗೀತದ ಸ್ವರೂಪವೂ ಬಹುಮಟ್ಟಿಗೆ ಬದಲಾಗಿ ಹೋಗಿತ್ತು. ಆ ಪದ, ಪಾರಿಭಾಷಿಕ ಪದವಾಗಿಯೇ ಉಪಯೋಗ. 

	ಬೆಟ್ಟದ ತಪ್ಪಲಿನ ಬಯಲು ಪ್ರದೇಶವೇ ನಾಟಕಾಲಯದ ಜಾಗ. ಅಲ್ಲಿ ಕುದುರೆಲಾಳದ ಆಕಾರದ ಸ್ಥಳವನ್ನು ಅಣಿಮಾಡಿ, ಮಧ್ಯದಲ್ಲಿ ನೃತ್ಯಮೇಳದ ವರ್ತುಳವನ್ನು ಗುರುತಿಸಿ, ಅದರ ನಡುವೆ ಡೈಯೊನೈಸಸ್ಸನ ವೇದಿಕೆಯನ್ನು ನಿರ್ಮಿಸಲಾಗುತ್ತಿತ್ತು. ಮೇಳದವರ ಸಂಖ್ಯೆಯನ್ನು ಐವತ್ತರಿಂದ ಹನ್ನೆರಡಕ್ಕೆ ಈಸ್ಕಿಲಸ್ ಇಳಿಸಿದ. ಸಾಫೊಕ್ಲೀಸ್ ಹದಿನೈದಕ್ಕೆ ಏರಿಸಿದ. ಅವರನ್ನು ಚಚ್ಚೌಕ ಕ್ರಮದಲ್ಲಿ ನಿಲ್ಲಿಸುವ ಏರ್ಪಾಡಿತ್ತು. ಅವರು ನರ್ತಿಸುತ್ತ ಪ್ರವೇಶಿಸಿದೊಡನೆ ನಾಟಕದ ಪ್ರಾರಂಭ; ಕೊನೆಯಲ್ಲಿ ಅವರು ನರ್ತಿಸುತ್ತ ಕಣ್ಮರೆಯಾಗುವುದೇ ನಾಟಕದ ಅಂತ್ಯ. ಅವರ ಗೀತನಾಟ್ಯ ಆಮೇಲೆ ಚಿಕ್ಕ ನೇಪಥ್ಯದ ಮೇಲೆ ಪಾತ್ರಗಳ ಸಂವಾದ, ಪುನಃಗೀತನಾಟ್ಯ, ಅನಂತರ ಸಂವಾದ-ಹೀಗಿರುತ್ತಿತ್ತು. ನಾಟಕದ ಬೆಳೆವಣಿಗೆ. ಗೀತವೂ ನೃತ್ಯವೂ ನಾನಾ ಭೇದಗಳಿಂದ ಕೂಡಿರುತ್ತಿದ್ದವು. 

	ಸುಮಾರು ಹತ್ತು ಹದಿನೈದುಸಾವಿರ ಮಂದಿ ಪ್ರೇಕ್ಷಕರಾಗಿ ಕುಳ್ಳಿರುತ್ತಿದ್ದರು; ಯಾವ ಶುಲ್ಕವನ್ನೂ ಅವರು ಕೊಡಬೇಕಾದ್ದಿರಲಿಲ್ಲ. ಮೇಳದವರಿಗೂ ನಟರಿಗೂ ತಕ್ಕ ತರಬೇತು ಕೊಡುವುದು ಕವಿಯ ಜವಾಬ್ದಾರಿ; ಆಗೊಮ್ಮೆ ಈಗೊಮ್ಮೆ ಕವಿ ತನ್ನ ನಾಟಕದಲ್ಲಿ ತಾನೇ ಒಂದು ಪಾತ್ರವಹಿಸುತ್ತಿದ್ದ. ನಟರಿಗೆ ಗೊತ್ತಾದ ವೇತನ ಆಡಳಿತವರ್ಗದವರಿಂದ ಬಟವಾಡೆಯಾಗುತ್ತಿತ್ತು. ರಂಗಸಜ್ಜು ನಟರ ವೇಷಭೂಷಣ ಮುಂತಾದ ಪರಿಕರದ ಖರ್ಚನ್ನು ಚುನಾಯಿತ ಧನವಂತ ಹೊರುತ್ತಿದ್ದ. ನಾಟಕಕಾರದಲ್ಲಿ ಮೂವರನ್ನು ಆರಿಸಿಕೊಂಡು, ಅವರಲ್ಲಿ ಒಬ್ಬೊಬ್ಬನಿಂದಲೂ ಮೂರು ಗಂಭೀರನಾಟಕ ಮತ್ತು ಒಂದು ಮಿಶ್ರನಾಟಕ, ಹೀಗೆ ಒಟ್ಟು ನಾಲ್ಕರ ಕಟ್ಟು (ಟೆಟ್ರೋಲಜಿ) ಸಿದ್ಧವಾಗುವಂತೆ ಮಾಡಿ ಅಧಿಕಾರ ಸಂಪುಟ ಒಂದು ಸ್ಪರ್ಧೆ ಹೂಡುತ್ತಿತ್ತು. ಗೆದ್ದವನಿಗೂ ಧನವಂತನಿಗೂ ಕಿರೀಟದ ಬಹುಮಾನ. ನಟರು ಮೊಗವಾಡ, ರಜಾಯಿನಂಥ ಬಟ್ಟೆಯ ನಿಲುವಂಗಿ, ತಲೆಯ ಮೇಲೆ ಒಂದು ಕಿರೀಟ, ಕಾಲಿಗೆ ಮರದ ದಪ್ಪ ಅಟ್ಟೆಯ ದೊಡ್ಡ ಬೂಟು-ಇವುಗಳಿಂದ ಅಲಂಕೃತರಾಗಿ ಸುಮಾರು ಆರೂವರೆ ಏಳು ಅಡಿ ಎತ್ತರದವರಾಗಿ ಸೌಮ್ಯ ವೈಭವದ ನಿಧಾನ ಹೆಜ್ಜೆಯಿಂದ ಪರಿಣಾಮ ಬೀರುತ್ತಿದ್ದರು. ಸ್ತ್ರೀಪಾತ್ರಗಳಲ್ಲೂ ಗಂಡಸರೇ. ಪರಚಿತವಾದ ಪುರಾಣ ಕಥಾವಳಿಯಿಂದಲೇ ನಾಟಕಕ್ಕೆ ವಿಷಯವನ್ನು ಕವಿ ತೆಗೆದು ಕೊಳ್ಳಬೇಕಾಗಿತ್ತು. ಒಂದೇ ಮುಖ್ಯ ಘಟನಾವಳಿ, ಕ್ಲುಪ್ತಕಾಲದಲ್ಲೂ ಹೆಚ್ಚು ಕಡಿಮೆ ಒಂದೇ ಸ್ಥಳದಲ್ಲೂ ಅದು ಜರುಗಬೇಕು. ಕೆಲವೇ ಪಾತ್ರಗಳ ಸಂಭಾಷಣೆ ಇರಬೇಕು. ಘೋರ ಘಟನೆ ರಂಗದ ಮೇಲೆ ನಡೆಯಕೂಡದು, ವಾದವಿವಾದವೇ ಕೃತ್ಯ, ಭಾಷೆ ಛಂದಸ್ಸುಗಳು ನಿಯಮಬದ್ಧ-ಹೀಗೆ ಕಟ್ಟುಕಟ್ಟಳೆ ಇದ್ದಿತಾಗಿ ಕವಿಯ ಸ್ವಾತಂತ್ರ್ಯಕ್ಕೆ ಸಾಕಷ್ಟು ಆಸ್ಪದವಿರಲಿಲ್ಲ. ಆದರೂ ಗ್ರೀಕ್ ಗಂಭೀರನಾಟಕ ಮಾನವ ಸ್ವಭಾವದ ಮೂಲ ಚಲನವಲನಗಳ ನಿಕಟ ಪರಿಚಯವನ್ನು ನಮಗೆ ಮೂಡಿಸುತ್ತದೆ. ಅದನ್ನು ಸರಿಗಟ್ಟುವ ಮಹಾಸಾಹಿತ್ಯ ಈಚಿನ ಯುಗಗಳಲ್ಲಿ ದಿಟವಾಗಿ ಅಪರೂಪ.

	ಕ್ರಿ.ಪೂ. 5ನೆಯ ಶತಮಾನ ಗ್ರೀಕ್ ಗಂಭೀರನಾಟಕದ ಸುವರ್ಣಯುಗ. ಕ್ರಿ.ಪೂ. ಸು. 499 ರಿಂದ 403 ಅವಧಿಯಲ್ಲಿ ಆಗಿಬಂದ ಮೂವರು ಮಹಾ ಕವಿಗಳೇ ಅದನ್ನು ನಡೆಸಿಕೊಂಡವರು, ಗಂಭೀರನಾಟಕಕಾರತ್ರಯ ಎಂಬ ಘನಮರ್ಯಾದೆಯನ್ನು ಪಡೆದುಕೊಂಡವರು; ಅವರಾರೆಂದರೆ ಈಸ್ಕಿಲಸ್, ಸಾಫೊಕ್ಲೀಸ್, ಯುರಿಪಿಡೀಸ್, ಅವರಿಗೆ ಕೊಂಚ ಪೂರ್ವದಲ್ಲಿ ಇದ್ದು ನಾಟಕ ರಚಿಸಿದ ಫ್ರೀನಿಕಸ್, ಪ್ರಾಟಿನಸ್, ಕೀರಿಲಸ್ಸರು ಕೇವಲ ನಾಮಾವಶೇಷರಾಗಿದ್ದಾರೆ. ಸಮಕಾಲೀನರಾಗಿದ್ದ ಇಯಾನ್, ಆಕಿಯಸ್, ಆಗಥಾನರೂ ಕೆಲವು ಚೂರುಪಾರುಗಳಿಂದ ಉಳಿದಿದ್ದಾರೆಯೇ ವಿನಾ ಪೂರ್ಣ ಗ್ರಂಥಗಳಿಂದ ಅಲ್ಲ. ಮೋರಿಕಸ್, ನೊತಿಪ್ಪಸ್, ಅಕೆಸ್ಟರ್, ಥಿಯಾಗ್ನಿಸ್ ಮುಂತಾದ ಇತರ ಕೆಲವು ನಾಮಾಂಕಿತಗಳು ಆರಿಸ್ಟಾಫನೀಸನ ಅವಹೇಳನದಿಂದ ತಿಳಿದುಬರುತ್ತವೆಯೇ ಹೊರತು ಅವರ ಒಂದು ಚೂರು ಕೃತಿ ಕೂಡ ಉಳಿದುಬಂದಿಲ್ಲ.

	ಕ್ರಿ.ಪೂ. 4ನೆಯ ಶತಮಾನದಲ್ಲಿ ಗಂಭೀರನಾಟಕದ ವಾರ್ಷಿಕ ಪ್ರದರ್ಶನ ಏನೂ ಕಡಿಮೆಯಾಗಲಿಲ್ಲ. ನಾಟಕಕಾರತ್ರಯದ ಕೃತಿಗಳು ಮತ್ತೆಮತ್ತೆ ಅಪೇಕ್ಷಿತವಾದುವು, ಹಿತವಾದುವು. ಅಲ್ಲದೆ ಹೊಸ ನಾಟಕಗಳ ರಚನೆಗೂ ವಿಶೇಷ ಪ್ರೋತ್ಸಾಹ ಸಿಕ್ಕಿತು. ಹಾಗಾಗಿ ನಾಟಕಕಾರರು ಅತಿ ಚುರುಕಿನಿಂದ ರೂಪಕ ಕಟ್ಟಿ ಹೊರತರಬೇಕಾಗಿ ಬಂತು. ಹೇರಳವಾಗಿಯೂ ಕಟ್ಟಬೇಕಾಯಿತು. ಥಿಯೊಡೆಕ್ಟೀಸ್ 50, ಕಾರ್ಸಿನಸ್ 160, ಆಸ್ಟಿಡಾಮಸ್ 240-ಈ ರೀತಿ ಅವರ ಬರೆಹ ಪಟ್ಟಿಯಾಗಿದೆ. ಗುಣದಲ್ಲಾದರೂ ಅವಾವುದಕ್ಕೂ ರವೆಯಷ್ಟು ಮೆಚ್ಚಿಕೆಯೂ ಲಭಿಸಲಾಗದು. ನೂರಾರು ಕೃತಿಗಳಲ್ಲಿ ಒಂದೂ ಉಳಿದುಬಂದಿಲ್ಲ. ಈಸ್ಕಿಲಸ್ ಸಾಫೊಕ್ಲೀಸ್ ಯುರಿಪಿಡೀಸರು ಬರೆದವೆಂದು ನಮೂದಿತವಾಗಿರುವ ಕೃತಿಗಳ ಸಂಖ್ಯೆ ಕ್ರಮವಾಗಿ 90, 123, 92; ಅಲೆಗ್ಸಾಂಡ್ರಿಯನ್ ಅವಧಿಯಲ್ಲಿ ಪ್ರಚುರದಲ್ಲಿದ್ದ ಅವರ ಕ್ರಮವಾಗಿ 72. ದೊಡ್ಡಸಂಖ್ಯೆ 78, ಒಟ್ಟು 305ರಲ್ಲಿ ಈಗ ಲಭ್ಯವಾಗಿರುವುವು 33; ಕ್ರಮವಾಗಿ 7, 7, 19-ಅಷ್ಟೆ. ಆ ಶ್ರೇಷ್ಠತ್ರಯ ಹೊರ ತಂದ ಅಲೆಗ್ಸಾಂಡ್ರಿಯನ್ ಅವಧಿಯಲ್ಲಿ ಸುಮಾರು 240 ಆದರೂ ಇದ್ದಿರಬೇಕು. ಆಗಿರುವ ನಷ್ಟ ಆಗಾಧವೆಂದೇ ಹೇಳಬೇಕು.

	ಇರುವ ಅವರ ರೂಪಕಗಳಿಂದ ಅವರ ಬೇರೆ ಬೇರೆ ಶಕ್ತಿಯನ್ನೂ ಸ್ವಂತ ಲಕ್ಷಣಗಳನ್ನೂ ಅರಿಯುವುದು ಸಾಧ್ಯ. ಒಬ್ಬನಿಂದ ಇನ್ನೊಬ್ಬನಿಗೆ ಗಂಭೀರ ನಾಟಕ ಸರಿಯುವಾಗ ಅದಕ್ಕಾದ ವಿಕಾಸ ಸಹಜವೂ ತರ್ಕಸಮ್ಮತವೂ ಸಮರ್ಪಕವೂ ಆಗಿತ್ತು. ಅದರ ಎರಡು ಭಾಗಗಳಾದ ಸಂಭಾಷಣೆ ಮತ್ತು ಸಂಗೀತಗಳಲ್ಲಿ ಎರಡನೆಯದಕ್ಕೆ ಸ್ವಾಭಾವಿಕವಾಗಿಯೇ ಇಳಿಮುಖ. ಈಸ್ಕಿಲಸ್ಸನಲ್ಲಿ ಕೋರಸ್ ಭಾಗ 3/5 ರಿಂದ 2/5 ಕ್ಕೂ ಸಾಫೊಕ್ಲೀಸನಲ್ಲಿ 1/3 ರಿಂದ 1/6 ಕ್ಕೂ ಯುರಿಪಿಡೀಸನಲ್ಲಿ 1/7 ರಿಂಧ 1/10 ಕ್ಕೂ ಇಳಿದು ಕಡಿಮೆಯಾದದ್ದು ಎಷ್ಟೊಂದು ಯುಕ್ತ ಬದಲಾವಣೆ. ಮೂವರಿಗೂ ಮನುಜವರ್ಗಕ್ಕೂ ದೇವವರ್ಗಕ್ಕೂ ಇರುವ ಸಂಬಂಧ ಮುಖ್ಯ ವಿಚಾರವಾಗಿದ್ದರೂ ಅದರ ಪ್ರತಿಪಾದನೆಯಲ್ಲಿ ಮಾನವಾಂಶಕ್ಕೆ ಕವಿಯ ಲಕ್ಷ್ಯ ಹೆಚ್ಚು ಹೆಚ್ಚಾದದ್ದನ್ನೂ ಅವನ ದೃಷ್ಟಿ ಸ್ಥೂಲದಿಂದ ಸೂಕ್ಷ್ಮವಾದ್ದನ್ನೂ ಕಾಣುತ್ತೇವೆ. ಈಸ್ಕಿಲಸ್ಸನ ಪಾತ್ರಗಡಣ ದೇವತೆಗಳು ಉಪ ದೇವತೆಗಳು ಅತಿಮಾನವರು. ಸಾಪೊಕ್ಲೀಸನದು ಆದರ್ಶ ಮಾನವರು, ಯುರಿಪಿಡೀಸನದು ಮಾನವರು. ಮೂವರ ಗಂಭೀರ ಸಿದ್ಧಾಂತಗಳಲ್ಲೂ ಅದೇ ಬಗೆಗೆ ವ್ಯತ್ಯಾಸವಿದೆ. ಮಾಡುವವ ಮನುಷ್ಯ; ಮಾಡಿದ್ದನ್ನು ಉಣ್ಣುವವ ಮನುಷ್ಯ ದೇವತೆಗಳನ್ನು ಬಯ್ಯುವುದೇಕೆ? ಅತಿಗೆ ಹೋಗದೆ ಮಿತದಲ್ಲಿರುವ ನರನಿಗೆ ಸದಾ ನೆಮ್ಮದಿ-ಎಂದು ಈಸ್ಕಿಲಸ್ ಮನಗಂಡು, ಮನಸ್ಸಿಟ್ಟು ಉಪದೇಶಿಸಿದ. ಸಾಪೊಕ್ಲೀಸ್ ಮುಂದೆ ನಡೆದು, ನಿರಪರಾಧಿಗೂ ಸಂಕಟ ಬರಬಹುದು. ಅದು ವಿಧಿಯ ಲೀಲೆ; ಬಂದದ್ದನ್ನು ಸ್ಥೈರ್ಯದಿಂದ ತಾಳಿ ಮನುಷ್ಯ ಉದಾತ್ತನಾಗಬೇಕು ಎಂದು ಹೇಳಿದ. ಯುರಿಪಿಡೀಸ್, ಎಡರೂ ನೋವೂ ಬರುವುದರಲ್ಲಿ ದೇವತೆಗಳ ಕೈವಾಡ ಇದ್ದೇ ಇದೆ; ಮನುಷ್ಯನ ಸ್ಥಿತಿಯನ್ನು ಕುರಿತು ಎಷ್ಟು ಕನಿಕರಪಟ್ಟರೂ ಸಾಲದು ಎಂದು ಒತ್ತಿನುಡಿದ. ಈಸ್ಕಿಲಸ್ಸನ ಹಿರಿಯ ಗುಣ ಮಹಾಘನತೆ; ಅವನ ಮಹೋನ್ನತ ಶೈಲಿಯ ವಾಗ್‍ವೈಭವ ಅವನಿಗೇ ಮೀಸಲು. ಮಿತಿ, ಸಂಕ್ಷಿಪ್ತತೆ, ಅರ್ಥಪೂರ್ಣ ಸರಳತೆ, ತುಂಬಿಸೂಸುವ ಧ್ವನಿ, ಮಾಧುರ್ಯ-ಇವು ಸಾಪೊಕ್ಲೀಸನ ಲೇಖನವಿಧಾನ; ಶಿಷ್ಟತೆಗೆ ಅತ್ಯುತ್ಕ್ರಷ್ಟ ಉದಾಹರಣೆ. ಯುರಿಪಿಡೀಸನ ಧೋರಣೆ ಮನುಜ ಸಮಾಜಕ್ಕೆ ಹತ್ತಿರ ಹತ್ತಿರ. ಗೊಂದಲದಲ್ಲಿ ಸಿಕ್ಕಿಬಿದ್ದು ರಾಗಗ್ರಸ್ತರಾದ ಹೆಣ್ಣುಗಂಡುಗಳ ಮಾತುಕತೆಯನ್ನು ಕಾವ್ಯಮಯವಾಗಿ ಪರಿಷ್ಕರಿಸುವ ಜಾಣ್ಮೆ ಅವನಿಗೆ ದೈವದತ್ತವಾಗಿತ್ತು; ಮನಮೋಹಕವಾದ ಇಂಪನ್ನು ಪದಸರಣಿಗೆ ಕೂಡಿಸುವ ಕೌಶಲವೂ ಅವನಿಗಿತ್ತು. ಮುಂದಣ ಶತಮಾನಗಳಲ್ಲಿ ಅವನಿಗೇ ಅತ್ಯಧಿಕ ಪ್ರತೀತಿ. 

	2 ಮಿಶ್ರನಾಟಕ: ಅನುಬಂಧವಾಗಿ ಅಥವಾ ಮುಕ್ತಾಯವಾಗಿ ಪ್ರತಿಯೊಬ್ಬ ಕವಿಸ್ಪರ್ಧಿಯೂ ಬರೆಯಲೇಬೇಕಾಗಿದ್ದ ಮಿಶ್ರನಾಟಕ ಒಂದು ಸಮಸ್ಯೆಯಾಗಿದೆ. ಕಾರಣ, ನಮಗೆ ಲಭ್ಯವಾಗಿರುವ ಮಿಶ್ರನಾಟಕ ಒಂದೇ ಒಂದು - ಯುರಿಪಿಡೀಸನ ಸೈಕ್ಲಾಪ್ಸ್. ಅದರ ಕಥಾವಸ್ತು, ಟ್ರಾಯಿನಿಂದ ಹಿಂದಿರುಗುವಾಗ ಆಡಿಸಿಯಸ್ ತನ್ನ ಜೊತೆಯವರೊಂದಿಗೆ ಒಂದೇ ಕಣ್ಣಿನ ದೈತ್ಯ ಪಾಲಿಫೀಮನಿಗೆ ಸಿಕ್ಕಿಬಿದ್ದು , ಅವನಿಗೆ ದ್ರಾಕ್ಷಾಮದ್ಯ ಕುಡಿಸಿ ನಿದ್ರಿಸುವಂತೆ ಮಾಡಿ, ದಪ್ಪ ಕೋಲನ್ನು ಚೂಪು ಮಾಡಿ ಬೆಂಕಿಯಲ್ಲಿ ಕಾಸಿ, ಅದನ್ನು ದೈತ್ಯನ ಕಣ್ಣಿನೊಳಕ್ಕೆ ಚುಚ್ಚಿ ಕುರುಡಾಗಿಸಿ ಅವನ ಹಿಡಿತದಿಂದ ತಪ್ಪಿಸಿಕೊಂಡು ಯಾನ ಕೈಗೊಂಡ ಆಖ್ಯಾಯಿಕೆ. ನಾಟಕಕ್ಕೆ ನೃತ್ಯಮೇಳ, ಪಾನದೇವತೆ ಬಾಸ್ಸನ ಅನುಯಾಯಿಗಳಾದ ಸ್ಯಾಟಿರ್ ಮಂದಿ. ಅವರಲ್ಲಿ ಮುದುಕನಾದ ಸೈಲಿನಸ್ ಇನ್ನೊಂದು ಪಾತ್ರ. ಒಬ್ಬ ವಿದೂಷಕನಂತೆ ಅವನ ಚಿತ್ರಣವಾಗಿದೆ. ಅವನನ್ನೂ ಸ್ಯಾಟಿರರನ್ನೂ ಬಲಾತ್ಕಾರದಿಂದ ಹಿಡಿದುತಂದು ಪಾಲಿಫೀಮ್ ತನ್ನ ಗುಲಾಮರನ್ನಾಗಿಸಿಕೊಂಡಿದ್ದಾನೆ. ಅಡಿಸಿಯಸ್ಸಿಗೆ ಅವನು ಕೊಟ್ಟ ಮದ್ಯಕ್ಕೆ ಪ್ರತಿಯಾಗಿ ದೈತ್ಯನ ಹಾಲು, ಚೀಸು, ಮಾಂಸ ಮೊದಲಾದವನ್ನು ಕೊಟ್ಟು, ದೈತ್ಯ ಬಂದೊಡನೆ ಅವನ್ನು ಆಗಂತುಕರೇ ಅಪಹರಿಸಿದರೆಂದು ಸುಳ್ಳಾಡಿ ತಲೆತಪ್ಪಿಸಿಕೊಳ್ಳುತ್ತಾನೆ; ದೈತ್ಯನಿಗೆ ಕಾಣದಂತೆ ಮದ್ಯಕ್ಕೆ ಕೈಹಾಕುವ ಅವನ ಪ್ರಯತ್ನ ಹುಡುಗಾಟದಂತೆ ಹಾಸ್ಯಾಸ್ಪದ. ಸ್ಯಾಟಿರರು ವಿನೋದಕ್ಕಿಂತ ಹೆಚ್ಚಾಗಿ ವಿಲಾಸಿಗಳು; ಅವರದ್ದು ಕುಡಿತ ಕುಣಿತ ಸಂಭೋಗಗಳ ಮಾತೇ ಮಾತು. ಕೋರಸ್ಸಿನ ನರ್ತನ ರಭಸ ಆವೇಶದಿಂದ ಕೂಡಿದ್ದಾಗಿರಬೇಕು; ಆ ಸೂಚನೆ ಇದೆ. ಪಾಲಿಫೀಮ್ ಆಡಿಸಿಯಸ್ಸಿನ ಜನರಲ್ಲಿ ಮೈತುಂಬಿಕೊಂಡ. ಇಬ್ಬರನ್ನು ಬಡಿದು ಕೊಂದು ಅವರ ಮಾಂಸವನ್ನು ಸುಟ್ಟು ಬೇಯಿಸಿ ಭಕ್ಷಿಸುವ ವೃತ್ತಾಂತ ಕಥಿತವಾಗುತ್ತದೆ. ಕುರುಡನಾದ ಪಾಲಿಫೀಮ್ ಆಡಿಸಿಯಸ್ ಮತ್ತು ಇತರರನ್ನು ಹಿಡಿಯಲು ತಡಕಾಡುವುದು. ಬಲಗಡೆ ಇದ್ದಾರೆ, ಹಿಂದೆ ಇದ್ದಾರೆ ಎಂದು ಸ್ಯಾಟಿರರು ಹುಸಿಮಾತು ಹೇಳುವುದು. ಅವನು ಹಾಗೆ ನುಗ್ಗಿ ಗವಿಯ ಕಲ್ಲಿಗೆ ತಲೆ ಚಚ್ಚಿಕೊಳ್ಳುವುದು-ಇಂಥ ವಿನೋದವೂ ಉಂಟು. ಏರಿಯನ್ ರಚಿಸಿದ ಒಂದು ನೃತ್ಯಗೀತಕ್ಕೆ ಹೆಸರು ಟಿರ್ಬ್ಯಾಸಿಯ; ಅದು ಸ್ಯಾಟಿರರು ಸೈಲಿನೈಗಳ ಅತ್ಯಾಮೋದದ ದಾಂಧಲೆ ಕುಣಿತ. ಅದರಿಂದ ಈ ಮಿಶ್ರನಾಟಕ ಪ್ರಾಯಶಃ ಬೆಳೆದುಬಂತು. ಗಂಭೀರನಾಟಕವನ್ನು ಹಲವು ಘಂಟೆ ನೋಡಿ ನಲುಗಿದ ಪ್ರೇಕ್ಷಕರಿಗೆ ಕೇವಲ 700 ಪಂಕ್ತಿಗಳ ಕಿರುನಾಟಕ ಹಾಸ್ಯ ಗಲಭೆ ಭಾವಾವೇಶಗಳನ್ನು ತುಸು ಹೊತ್ತು ಒದಗಿಸಿ ಚಿತ್ತಸ್ವಾಸ್ಥ್ಯ ಪಡೆಯುವುದಕ್ಕೆ ಸಹಾಯಕವಾಗುತ್ತಿತ್ತೊ ಏನೊ. ಪ್ರಾಟಿನಾಸ್ ಹೆಸರಾದ ಕವಿ.

	3 ಹರ್ಷನಾಟಕ: ಪ್ರಾಚೀನ ಗ್ರೀಕ್ ಹರ್ಷನಾಟಕ ಗಂಭೀರನಾಟಕದಂತೆ ಏಕರೂಪದ್ದಾಗಿರಲಿಲ್ಲ. ಹಳೆಯದು, ನಡುವಣದು, ಹೊಸದು ಎಂಬ ಮೂರು ರೂಪಗಳನ್ನು ಅದು ತಾಳಿತು. ಕ್ರಿ.ಪೂ. ಸು. 520 ರಿಂದ ಕ್ರಿ.ಪೂ. 400ರ ವರೆಗೆ ಹಳೆಯದರ ಅವಧಿ; ಕ್ರಿ.ಪೂ 400ರಿಂದ ಕ್ರಿ.ಪೂ. ಸು. 336ರ ತನಕ ನಡುವಣದರ ಅವಧಿ; ಅಲ್ಲಿಂದ ಸುಮಾರು ನೂರು ವರ್ಷ, ಎಂದರೆ ಪ್ರಾಚೀನ ರೋಮನರು ಗ್ರೀಕರ ಸಾಹಿತ್ಯವನ್ನು ಅನುಕರಣ ಮಾಡತೊಡಗುವ ವರೆಗೆ. ಹೊಸದರ ಅವಧಿ. ಅನೇಕರು ಹರ್ಷನಾಟಕವನ್ನು ವಿಪುಲವಾಗಿ ರಚಿಸಿ ಪ್ರದರ್ಶಿಸಿದ್ದರೂ ಆರಿಸ್ಟಾಫನಿಸನ ಕೃತಿಗಳಲ್ಲಿ ಹನ್ನೊಂದುನ್ನು ಬಿಟ್ಟರೆ ಮತ್ತಾವ ಕೃತಿಯೂ ಲಭ್ಯವಾಗಿಲ್ಲ. ಅಷ್ಟೇ ಅಲ್ಲ. ನಡುವಣ ಹರ್ಷನಾಟಕ ಹೇಗಿತ್ತೆಂದು ಊಹಿಸಬಹುದೇ ಹೊರತು ಅದರ ಯಥಾರ್ಥ ಚಿತ್ರ ದೊರೆಯುವುದಿಲ್ಲ. ಹೊಸ ಹರ್ಷನಾಟಕದ ಗ್ರೀಕ್ ನಿದರ್ಶನ ಯಾವುದೂ ಇಲ್ಲದಿದ್ದರೂ ಪ್ಲಾಟಸ್ ಸ್ಟಾಷಿಯಸ್‍ಟೆರೆನ್ಸ್ ಎಂಬ ಪ್ರಾಚೀನ ರೋಮನರ ಹರ್ಷನಾಟಕ ಅದರ ಮಾದರಿಯಲ್ಲಿ ಕಟ್ಟಿದ್ದಾದ್ದರಿಂದ ಅದರ ಲಕ್ಷಣ ನಮಗೆ ತಿಳಿಯುತ್ತದೆ. ಅಷ್ಟೊಂದು ವಿನೋದ ನಾಟಕಗಳ ನಷ್ಟ ಹೇಗಾಯಿತೊ ಏಕಾಯಿತೊ ಹೇಳಲಾಗದು. 

	ಕಾಮೆಡಿ (ಹರ್ಷನಾಟಕ) ಎಂಬ ಶಬ್ದ ಕೋಮೆ ಎಂದರೆ ಹಳ್ಳಿ ಎಂಬುದರಿಂದ ಉತ್ಪನ್ನವಾಯಿತೆಂದೂ ಹಳ್ಳಿಗಾಡಿನವರು ಗುಂಪುಗಂಪಾಗಿ ಹಾಡಿ ಲೇವಡಿ ಕುಣಿತವನ್ನು ಮೆರೆಯಿಸುತ್ತ ನೋಟಕರಿಗೆ ಸಂತಸ ಉಂಟುಮಾಡುತ್ತಿದ್ದರೆಂದೂ ಅದರಿಂದ ಕಾಮೆಡಿಯ ಪ್ರಾರಂಭವೆಂದೂ ಅರಿಸ್ಟಾಟಲ್ ವಿವರಿಸಿದ. ಆ ಸ್ವಚ್ಛಂದ ತಂಡದವರು ಬಹುವಾಗಿ ಶಿಶ್ನಗೀತ ಗಾಯನಮಾಡುತ್ತ ಶಿಶ್ನಲಾಂಛನವನ್ನು (ಫ್ಯಾಲಸ್) ಅಲಂಕರಿಸಿ ಎತ್ತಿಹಿಡಿಯುತ್ತಿದ್ದುದರಿಂದ ಅವರಿಗೆ ನಗರಗಳಲ್ಲಿ ಅವಕಾಶ ಸಿಕ್ಕದೆ ಹೋಯಿತು; ಕ್ರಮೇಣ ಆ ಅಶ್ಲೀಲತೆ ನಗರಗಳನ್ನೂ ಪ್ರವೇಶಿಸಿತು. ಇದೂ ಅವನ ಅಭಿಪ್ರಾಯ. ಆದರೆ ಕಾಮೆಡಿ ಪದ ಬಂದದ್ದು ಕೋಮೆಯಿಂದಲ್ಲ; ಕಾಮಾಸ್ (ಬಹುವಚನ ಕಾಮಾಯ್) ಪದದಿಂದ, ಅದರ ಅರ್ಥ ಮೋದಗಾರರು (ರೆವೆಲರ್ಸ್.) ದ್ರಾಕ್ಷಿಯನ್ನು ಕೊಯ್ದು ಮದ್ಯಮಾಡುವ ಸಮಯದಲ್ಲೂ ಬೆಳೆಯನ್ನು ಕೊಯ್ದು ಕಣಜಕ್ಕೆ ತುಂಬುವಾಗಲೂ ಜನರಿಗೆ ಸ್ವಾಭಾವಿಕವಾಗಿ ಸುಗ್ಗಿಯ ಉಲ್ಲಾಸ. ಕುಡಿತ ಕುಣಿತ ಪೈರುಪಚ್ಚೆಗಳ ಆಧಿದೇವತೆಯಾದ ಡೈಯೊನೈಸಸನನ್ನು ಭಜಿಸುತ್ತ ಒಂದೆರಡು ದಿನ ಆಮೋದದ ಹಬ್ಬವನ್ನು ಆಚರಿಸುತ್ತಿದ್ದರು; ಅದರ ಅಂಗವಾಗಿ ಪ್ರಜೋತ್ಪತ್ತಿಯ ಸಂಕೇತಕ್ಕೆ ಅವರು ಮುಚ್ಚುಮರೆಯಿಲ್ಲದೆ ಪೂಜೆ ಸಲ್ಲಿಸಿದುದು ಅಚ್ಚರಿಯಲ್ಲ. ಅಷ್ಟೇಕೆ, ಕಾಮೆಡಿ ಕಲಾತ್ಮಕವಾಗಿ ಅಭಿವೃದ್ಧಿ ಹೊಂದಿದ ಮೇಲೂ ಅದರ ನಟರು ದೊಡ್ಡ ಕೃತಕ ಶಿಶ್ನವನ್ನು ತಮ್ಮ ವೇಷದ ಭಾಗವಾಗಿ ಕಟ್ಟಿಕೊಳ್ಳುತ್ತಿದ್ದರು. ಕಾಮೆಡಿ ಅಂತ್ಯವಾಗುವುದು ನಾಯಕನಾಯಕಿಯರ ವಿವಾಹದಿಂದ; ಗ್ರೀಕರಲ್ಲೂ ಅವರ ಶಿಷ್ಯರಾದ ರೋಮನರಲ್ಲೂ ಕೆಲವು ವೇಳೆ ಯಾವುದೊ ಹುಡುಗಿಯನ್ನು ತಂದು ನಾಯಕನಿಗೆ ಮದುವೆಮಾಡಿಸುವುದೂ ನಾಟಕದಲ್ಲಿ ಜರುಗುತ್ತಿತ್ತು. ಮೈಥ್ಯಾನದ ವಿಚಾರ ನಿರ್ಲಜ್ಜೆಯಿಂದ ಪ್ರಕಟಿತವಾಗುತ್ತಿತ್ತು, ನಟರ ಮೂಲಕ. ಆರಿಸ್ಟಾಫನೀಸ್ ತನ್ನಿಂದ ಹರ್ಷನಾಟಕದ ಶುದ್ಧೀಕರಣ ಮತ್ತು ಅಂದಗೊಳಿಕೆ ಆಯಿತು, ಎಂದು ಹೇಳಿದ ಮಾತಿನಲ್ಲಿ ಅವನ ಹಿಂದೆ ಅದು ಹೇಗಿದ್ದಿತೆಂಬುದು ವ್ಯಂಜಕವಾಗುತ್ತದೆ. ಗಂಭೀರನಾಟಕಕ್ಕಿಂತ ಹರ್ಷನಾಟಕ ವಾಸ್ತವಿಕ ಜೀವನಕ್ಕೆ ಬಲು ಹತ್ತಿರವಾದ್ದು.

	ಕಾಮೆಡಿ ಮೊದಲು ಬೆಳೆದುಬಂದದ್ದು ಸಿಸಿಲಿಯಲ್ಲಿ, ಆಮೇಲೆ ಆಟಿಕದಲ್ಲಿ. ನಾನಾ ರೀತಿಯ ವಿನೋದ ದೃಶ್ಯಗಳೂ ಪ್ರಸಂಗಗಳೂ ಮೂಕಾಭಿನಯಗಳೂ ಮೆಗಾರಾ ಮೊದಲಾದ ಸ್ಥಳಗಳಲ್ಲಿ ಎದ್ದುಬಂದುವು. ಕ್ರಿ.ಪೂ. ಸು. 580ರ ಹೊತ್ತಿಗೇ ಸುಸಾರಿಯನ್ ಎಂಬಾತನ ಮೆಗಾರಾ ಪ್ರಹಸನಕ್ಕೆ ಪ್ರಸಿದ್ಧಿ ಬಂದಿತ್ತು. ಕ್ರಿ.ಪೂ. ಸು. 526ರಲ್ಲಿ ಜನಿಸಿದ ಎಪಿಕಾರ್ಮಸ್ ಪಡೆದ ಖ್ಯಾತಿ ದೊಡ್ಡದು. ಆತ ಮೆಗಾರಾದಲ್ಲಿದ್ದು ಆಮೇಲೆ ಸಿರಕ್ಯೂಸಿಗೆ ಹೋದ. ಅವನ ಕೃತಿಗಳು ಮೂರು ಬಗೆಯವು : ಪುರಾಣ ಕಥಾವಳಿಯ ಶ್ರೇಷ್ಠ ಪುರುಷರನ್ನು ನಕಲಿಗೈಯುವ ಅಣಕನಾಟಕ; ಜನಜೀವನದ ಸಾಮಾನ್ಯ ಲಘುಪ್ರಸಂಗಗಳ ದೃಶ್ಯಾವಳಿ; ತತ್ತ್ವ ಪ್ರಮುಖವಾದ ವಾದವಿವಾದ. ತ್ವರೆ ಗಡಿಬಿಡಿ ಓಡಾಟಗಳಿಂದ ಅವನ ನಾಟಕ ತುಂಬಿರುತ್ತಿತ್ತಂತೆ. ಇನ್ನೊಬ್ಬ ನಾಟಕಕಾರ ಸೊಫ್ರಾನ್; ಗಂಡು ಮೈಮ್, ಹೆಣ್ಣು ಮೈಮ್ ಎಂಬ ಎರಡು ಬಗೆಯ ಕೃತಿ ಅವನಿಂದ ರಚಿತವಾದುವು. ಅವನಿಗೂ ಪ್ರಖ್ಯಾತಿಯಿತ್ತು. ಸಿಸಿಲಿಯ ವಿನೋದನಾಟಕದ ಪ್ರಭಾವ ಆಟ್ಟಿಕದ ಮೇಲೂ ಬಿದ್ದಿತೆಂಬುದು ನಿಸ್ಸಂದೇಹ.

	ಆದರೂ ಹರ್ಷನಾಟಕ ಕಲಾಪೂರ್ಣವಾದದ್ದೂ ಉತ್ತಮ ಪ್ರಗತಿ ಹೊಂದಿದ್ದೂ ಆಟಿಕದ ಪ್ರಧಾನಪಟ್ಟಣವೂ ಪ್ರಾಚೀನ ಗ್ರೀಕರ ಸಮಸ್ತಸಂಸ್ಕøತಿಯ ಏಕೈಕ ಕೇಂದ್ರವೂ ಆದ ಅಥೆನ್ಸಿನಲ್ಲಿ. ಕ್ರಿ.ಪೂ. ಸು. 486ರಂದು ಹರ್ಷನಾಟಕಕ್ಕೆ ಅಧಿಕೃತವಾಗಿ ಕೋರಸ್ಸು ಸಿಕ್ಕಿತು; ಎಂದರೆ ರಾಷ್ಟ್ರದ ಡೈಯೊನೈಸಿಯ ಲೀನಿಯ ಉತ್ಸವ ಸಮಯದಲ್ಲಿ ಅದೂ ಪ್ರದರ್ಶನಗೊಳ್ಳಬೇಕೆಂದು ನೇಮಕವಾಯಿತು. ಐದು ಕವಿಗಳಿಗೆ ಒಬ್ಬೊಬ್ಬರೂ ಒಂದೊಂದು ಕೃತಿ ಆಡಿಸುವಂತೆ ಏರ್ಪಾಡು. ಗೆದ್ದವನಿಗೆ ಬಹುಮಾನ. ಅವರು ಗಂಭೀರನಾಟಕದ ವಸ್ತುಸಂವಿಧಾನವನ್ನೇ ಅನುಕರಿಸಿ ಹರ್ಷನಾಟಕಕ್ಕೂ ಒಂದು ಅಂಗಾಂಗ ಸಂಯೋಜನೆಯನ್ನು ನೆರವೇರಿಸಿದರು. ಮೋದಗಾರರಿಂದ ಇಳಿದುಬಂದಿದ್ದ ಪರಿಹಾಸ ಚತುರೋಕ್ತಿ ವ್ಯಕ್ತಿವಿಡಂಬನ ಗೇಲಿಯ ಜೊತೆಗೆ ರಾಜಕೀಯ ಸಾಮಾಜಿಕ ಸಾಹಿತ್ಯಕ ಕಟುವಿಮರ್ಶೆಯನ್ನೂ ಸೇರಿಸಿದರು. ದೇವತೆಯ ಹಬ್ಬವಾದ್ದರಿಂದ ಕೋರಸ್ಸಿನ ನೃತ್ಯಗೀತ ಕಡ್ಡಾಯವಾಗಿ ಇರಬೇಕಾಯಿತು. ಹೀಗೆ ಕಾವ್ಯ ನಾಟ್ಯ ಸಂಗೀತ ಚಾಟೂಕ್ತಿ ಚರ್ಚೆ ಉಪದೇಶ ಭಾಷಣ ವಿಡಂಬನೆ ಮೊದಲಾದ ಅಂಶಗಳ ಕೂಟವಾದ್ದು ಹಳೆಯ ಹರ್ಷನಾಟಕದ ಸ್ವಂತಿಕೆ, ಸ್ವಾರಸ್ಯ, ಸೊಗಸು. ಕೋರಸ್ಸಿನ ಸಂಖ್ಯೆ 24; ಕೆಲವು ಸಾರಿ ಅದು 12, 12 ಆಗಿ ಇಬ್ಭಾಗವಾಗುತ್ತಿತ್ತು, ಮುಖ್ಯವಾಗಿ ಗಂಡು ಹೆಣ್ಣುಗಳ ಸಮಾಗಮ ಅವಶ್ಯಕವಾದಾಗ. ಆದಿಯಲ್ಲಿ ಒಂದು ಪೀಠಿಕೆ, ಆಮೇಲೆ ಪಕ್ಷಿಗಳಂತೆ ವಸನ ಧರಿಸಿದ ನೃತ್ಯಮೇಳದ ಪ್ರವೇಶ, ಅನಂತರ ನಾಟಕದ ಮುಖ್ಯವಿಷಯವಾದ ಒಂದು ಸೆಣಸಾಟ, ಅನಂತರ ನಮಗೆ ವಿಸ್ಮಯ ಹಿಡಿಸುವ ಒಂದು ವಿಚಿತ್ರ ಅಂಶ: ಮುಂಬರುವಿಕೆ (ಪ್ಯರಾಬಸಿಸ್). ಅದರಲ್ಲಿ ಮುಖ್ಯ ಪಾತ್ರವೊ ಪ್ರತ್ಯಕ್ಷವಾಗಿ ಕವಿಯೊ ರಂಗದ ಮುಂಭಾಗಕ್ಕೆ ಬಂದು ನಾನಾ ವಿಚಾರಗಳನ್ನು ಕುರಿತು ಸ್ಪಷ್ಟ ಅಭಿಪ್ರಾಯ ಒತ್ತಿಹೇಳುತ್ತಿದ್ದ. ಪ್ಯಾರಾಬೇಸಿಸ್ ಆದ ಮೇಲೆ ಕೆಲವು ಘಟನಾವಳಿ (ಎಪಿಸೋಡಿಯ). ಅವು ನಾಟಕದ ಕಥೆಯನ್ನು ಮುಂದುವರಿಸುವುದಕ್ಕಿಂತ ಹೆಚ್ಚಾಗಿ ಸೆಣಸಾಟದ ತೀರ್ಮಾನಕ್ಕೆ ಪುಷ್ಟಿಕೊಡುವ ಉದಾಹರಣೆ. ಮುಕ್ತಾಯವಾಗಿ ಭೋಜನಕೂಟಕ್ಕೊ ವಿವಾಹಕ್ಕೊ ತೆರಳುವ ಗಲಭೆ, ಮೆರವಣಿಗೆ.

	ನಾಟಕದ ವಿಷಯ ಕಲ್ಪಿತವೂ ನವನವ್ಯವೂ ನಗು ಬರಿಸುವಂಥದೂ ದ್ವಿಪಕ್ಷವುಳ್ಳದ್ದೂ ಜಗಳಕ್ಕೆ ಆಸ್ಪದ ಕೊಡುವಂಥದೂ ಆದರೆ ಸಮಕಾಲೀನ ಪರಿಸ್ಥಿತಿಗೆ ಮೋಪಾಗಿ ಅನ್ವಯಿಸುವುದೂ ಆದ ಒಂದು ಸಮಸ್ಯೆ: ಈ ಹಾಳು ಒಲಿಂಪಿಕ್ ದೇವತೆಗಳಿಂದ ನರರಿಗೆ ತ್ರಾಸ : ಅವರೇತಕ್ಕೆ ಆಗಸದಲ್ಲಿ ಒಂದು ಅಡ್ಡ ರಾಜ್ಯ ಸ್ಥಾಪಿಸಿ ಆಹುತಿ ಅರ್ಪಣೆ ಯಾವುದೂ ದೇವತೆಗಳಿಗೆ ತಲಪದಂತೆ ತಡೆಗಟ್ಟಬಾರದು ? ಗಂಡಸರು ಎಲ್ಲವನ್ನೂ ಹದಗೆಡಿಸಿಬಿಟ್ಟಿದ್ದಾರೆ : ಹೆಂಗಸರು ಆಡಳಿತವನ್ನು ಪೂರ್ತಿ ಕಸಿದುಕೊಂಡು ನೇರ್ಪಾಟಿಸಬಾರದೇತಕ್ಕೆ ? ಸರಿ, ಎರಡು ಕಕ್ಷಿಗಳು ಅನಿವಾರ್ಯ; ವಾಗ್ಯುದ್ಧ ಹಣಾಹಣಿ ಆಗಲೇಬೇಕು. ನೃತ್ಯಮೇಳದ ಕೆಲಸ ಹೋರಾಟಕ್ಕೆ ಸಮಾಧಾನ ಬಗೆಯುವುದಲ್ಲ, ಅದನ್ನು ಇನ್ನೂ ಹೆಚ್ಚಾಗಿ ಉಲ್ಬಣಗೊಳಿಸುವುದು. ವಿನೋದಪ್ರಮುಖವಾದರೂ ಆರಿಸ್ಟಾಫನೀಸನ ನಾಟಕಗಳಲ್ಲಿ ಮನನೀಯವಾದ ವಿವೇಕತತ್ತ್ವ ಹೇರಳವಾಗಿದೆ; ಹಾಸ್ಯಗಾರನಾದರೂ ಅವನೊಬ್ಬ ಹೃದಯಸೂರೆಮಾಡುವ ಅತ್ಯುತ್ತಮ ಕವಿ, ಮನಸ್ಸು ತುಂಬುವ ದೊಡ್ಡ ದಾರ್ಶನಿಕ.

	ಹಳೆಯ ಹರ್ಷನಾಟಕಕಾರರಲ್ಲಿ ಮೊದಲು ಹೆಸರು ಗಳಿಸಿದವ ಕ್ರಾಟಿನಸ್ (ಕ್ರಿ.ಪೂ. ಸು. 520-ಕ್ರಿ.ಪೂ. 423). ಆತ 21 ಕೃತಿಗಳನ್ನು ಕಟ್ಟಿದನಂತೆ. ಪ್ರಧಾನ ವ್ಯಕ್ತಿ ಪೆರಿಕ್ಲೀಸನನ್ನೇ ಆತ ತನ್ನ ವಿಡಂಬನೆಗೆ ಗುರಿಮಾಡಿದ. ಅವನೊಬ್ಬ ಕುಡುಕ, ಶಕ್ತಕವಿಯಾಗಿದ್ದರೂ ಅವನ ವೃದ್ಧಾಪ್ಯದಲ್ಲಿ ಯುವಕನಾದ ಆರಿಸ್ಟಾಫನೀಸ್ ಶೂರರು ಎಂಬ ತನ್ನ ನಾಟಕದಲ್ಲಿ ಅವನನ್ನು ಅಪಹಾಸ್ಯಗೈದ; ಕ್ರಾಟಿನಸ್ ರೇಗಿ ಮದ್ಯದ ಹೂಜಿ ಎಂಬ ಹರ್ಷನಾಟಕ ಬರೆದು, ಸ್ಪರ್ಧೆಯಲ್ಲಿ ಆರಿಸ್ಟಾಫನೀಸನ ಘನ ಕೃತಿ ಮೋಡಗಳು ಎಂಬುದನ್ನು ಸೋಲಿಸಿ, ಬಹುಮಾನಗಳಿಸಿದ. ಕ್ರೇಟೀಸ್ ಮತ್ತು ಅವನ ಹಿಂಬಾಲಕ ಪೆರಿಕ್ರೇಟೀಸ್ ಇಬ್ಬರೂ ಒಳ್ಳೆಯ ಕವಿಗಳು. ಕ್ರೇಟೀಸ್ ಮೊದಲಾಗಿ ಬಿಡಿ ವ್ಯಕ್ತಿಯ ಅವಹೇಳನವನ್ನು ತ್ಯಜಿಸಿ ಹಲವರಿಗೆ ಅನ್ವಯಿಸುವ ಸಾಧಾರಣ ಸಂಗತಿಯ ವಿಡಂಬನವನ್ನು ಬಳಕೆಗೆ ತಂದ. ಆಮೇಲೆ ಬಂದ ಯೂಪೋಲಿಸ್ ಶ್ರೇಷ್ಠ ಕವಿ, ಕಲ್ಪನಾ ಪ್ರವೀಣ, ಬಲಿಷ್ಠ ವಿಡಂಬನಕಾರ, ಆರಿಸ್ಟಾಫನೀಸನ ಸಮಕಾಲೀನ, ಸ್ನೇಹಿತ, ಜೊತೆಗಾರ ಕಾವ್ಯಕರ್ತೃ, ಹಾಗೂ ವಿರೋಧಿ.

	ನಡುವಣ ಹರ್ಷನಾಟಕದ ಬಗೆಗೆ ಹೇಳುವ ಸಂಗತಿ ಹೆಚ್ಚಾಗಿಲ್ಲ, ಹಳೆಯ ಹರ್ಷನಾಟಕದ ವ್ಯಕ್ತಿನಿಂದೆ ಬಯ್ಗಳ ಕೀಳು ಅಪಹಾಸ್ಯ ಅದರಲ್ಲಿ ಇರಲಿಲ್ಲ. ಬದಲಾಗಿ ಉಚ್ಚ ಕೃತಿಗಳ ಅಣಕ, ಪುರಾಣ ಕಥಾವಳಿಯ ಹೀನಯಿಕೆ, ತತ್ತ್ವಶಾಸ್ತ್ರದ ಟೀಕೆ, ಸಾಹಿತ್ಯದ ಲಘು ವಿಮರ್ಶೆಗಳು ತುಂಬಿಕೊಂಡು ರಸಯುಕ್ತವಾಗುತ್ತಿದ್ದುವು. ಆಂಟಿಫೇನೀಸ್ ಮತ್ತು ಅಲೆಕ್ಸಿಸ್ ನಡುನಾಟಕದ ಲೇಖಕರು. ಒಬ್ಬೊಬ್ಬರೂ ಇನ್ನೂರಕ್ಕೂ ಹೆಚ್ಚಾಗಿ ರೂಪಕ ರಚಿಸಿದರಂತೆ. ಆರಿಸ್ಟಾಫನೀಸ್ ಕೊನೆಯಲ್ಲಿ, ಎಂದರೆ ಕ್ರಿ.ಪೂ. 388ರಲ್ಲಿ, ಬರೆದ ಕೃತಿ ಧನ (ಪ್ಲೂಟಸ್). ಇದು ಅವನ ಇತರ ಕೃತಿಗಳಿಂದ ಬಹುಮಟ್ಟಿಗೆ ಬೇರೆಯಾಗಿದೆ. ಅದು ಹಳೆಯ ಹರ್ಷನಾಟಕ ಅಲ್ಲವೇ ಅಲ್ಲ, ನಡುವಣ ಹರ್ಷನಾಟಕ ಎಂದು ತಜ್ಞರು ನಿರ್ಧರಿಸಿದ್ದಾರೆ. ನಡುವಣ ಹರ್ಷನಾಟಕದಲ್ಲಿ ಕಟ್ಟರೆ ಊಟದ ಮತ್ತು ಕಂಠ ಪೂರ್ತಿ ಪಾನದ ಆಸಕ್ತ ವರ್ಣನೆ ಮತ್ತೆಮತ್ತೆ ಬರುತ್ತಿತ್ತಂತೆ. ಅದು ಕವಿಗಳ ದೈಹಿಕಾಪೇಕ್ಷೆಯ ಕ್ಷುದ್ರತನವೆಂದು ದೂರಿದ್ದಾರೆ. ನಿಜಾಂಶ ಅದಲ್ಲ. ಆಗಿನದು ಬರಗಾಲ. ಕ್ಷುದ್ಬಾಧೆಯಿಂದ ಸಂತಪ್ತರಾದವರಿಗೆ ಮೃಷ್ಟಾನ್ನಭೋಜನದ ವಿವರಣೆಯೇ ಒಂದು ವಿಧದಲ್ಲಿ ತೃಪ್ತಿಕಾರಕ.

	ಹೊಸ ಹರ್ಷನಾಟಕದ ಕರ್ತರಲ್ಲಿ ಮಿನಾಂಡರ್, ಫಿಲಿಮಾನ್, ಡೀಫಿಲಸ್ ಮುಖ್ಯರು. ಮೊದಲಿನ ಇಬ್ಬರೂ ಬರೆದ ರೂಪಕ 200ಕ್ಕೂ ಹೆಚ್ಚು; ಮೂರನೆಯವ ಬರೆದವು 100. ಮಿನಾಂಡರ್ ಬಹಳ ಖ್ಯಾತಿವಂತ, ದಕ್ಷ. ಅವರು ಯಾರದೂ ಒಂದು ಕೃತಿಯೂ ಉಳಿದುಬಂದಿಲ್ಲ. ಹೊಸ ನಾಟಕದ ಲಕ್ಷಣಗಳು ನಮಗೆ ಅರಿವಾಗಬೇಕಾದರೆ ಪ್ರಾಚೀನ ರೋಮನರ ಹರ್ಷನಾಟಕಕಾರರ ಬರವಣಿಗೆ ಉಂಟು, ಅದರ ನಿರ್ದುಷ್ಟ ಸಹಾಯವೂ ಉಂಟು. ರೋಮನರ ಟೆರೆನ್ಸ್, ಅವನಿಗಿಂತಲೂ ಹೆಚ್ಚಾಗಿ ಪ್ಲಾಟಸ್, ಗ್ರೀಕ್ `ಹೊಸ ಹರ್ಷನಾಟಕಕ್ಕೆ ಕನ್ನಡಿ. ಅದರ ಲಕ್ಷಣಗಳಲ್ಲಿ ಮುಖ್ಯವಾದವು ಇವು; ಕಾಲ್ಪನಿಕ ಪಾತ್ರಗಳ ಮೂಲಕ ಸಮಕಾಲದ ವಾಸ್ತವ ಜೀವನದ ಚಿತ್ರಣ; ಕಥಾಸಂವಿಧಾನದ ಅಚ್ಚುಕಟ್ಟು; ಪಾತ್ರಶಿಲ್ಪ; ಬರಿ ಚತುರೋಕ್ತಿಯಲ್ಲದ ಉತ್ತಮ ಹಾಸ್ಯ; ಮೇಲಾಗಿ ಸಾಹಸ ಗೂಡಿದ ರೊಮ್ಯಾಂಟಿಕ್ ಪ್ರಣಯ. ಹಲವಾರು ನಾಟಕಗಳಲ್ಲಿ ಕೊನೆಯ ಅಂಶದ ಮೇಲೆಯೇ ಅವಧಾರಣೆ. ನಾಯಕಿ ವೇಶ್ಯಾವರ್ಗಕ್ಕೆ ಸೇರಿದವಳಾಗಿರಬಹುದು. ಪ್ರಾಮಾಣಿಕ ಪ್ರಿಯ ದೊರೆತು ಅವನ ಮುಖಾಂತರ ಅಡ್ಡಿ ಅಡಚಣೆ ದಾಟಿ ಅವಳು ಗೃಹಸ್ಥೆಯಾಗುತ್ತಾಳೆ. ಅಥವಾ ನಾಯಕಿ ಬಾಲ್ಯದಲ್ಲಿ ಅಪಹೃತಳಾಗಿ ಕೆಟ್ಟ ಹೆಂಗಸರ ಕೈಗೆ ಸಿಕ್ಕೆ ತೊಳಲಿ ಕೊನೆಗೆ ಒಬ್ಬ ಧೀರ ಬಂಧುವಿನಿಂದ ಬಿಡುಗಡೆ ಹೊಂದುತ್ತಾಳೆ. ಒಂದೆರಡು ನಾಟಕಗಳಲ್ಲಿ ಉನ್ನತ ವಂಶದವಳೊ ರಾಜಕುಮಾರಿಯಾದವಳೊ ಕಷ್ಟಗಳಿಗೆ ಪಕ್ಕಾಗಿ ಪಾರಾಗುತ್ತಾಳೆ. ಒಟ್ಟಿನಲ್ಲಿ ನಾಟಕ ನಗುವಿಗಿಂತಲೂ ಹೆಚ್ಚಾಗಿ ಒಳ್ಳೆಯ ರಾಗಭಾವವನ್ನು ಪ್ರಚೋದಿಸುತ್ತದೆ. ಹೊಸ ಹರ್ಷನಾಟಕಕ್ಕೆ ಯುರಿಪಿಡೀಸನ ಇಯಾನ್ ಮೊದಲಾದ ನಾಟಕಗಳೇ ಆಕರ; ಆಧುನಿಕ ನಾಟಕ ಹೊಸ ಹರ್ಷನಾಟಕದ ಸಂತಾನ.
(ಎಸ್.ವಿ.ಆರ್.)

	ಅರಿಸ್ಟಾಫನೀಸ್ (ಕ್ರಿ.ಪು.448-385) ಸುಮಾರು ನಲವತ್ತು ನಾಟಕಗಳನ್ನು ಬರೆದ. ಹನ್ನೊಂದು ಉಳಿದಿದೆ. ಇವನ ನಾಟಕಗಳಲ್ಲಿ ಪ್ರಸಂಗಗಳು ಒಂದಕ್ಕೊಂದು ಹೊಂದಿಕೊಂಡು ವಿಕಸಿತವಾಗುವುದಿಲ್ಲ. ಇವನ ನಾಟಕಗಳಿಗಾಗಿ ನೃತ್ಯಮೇಳಗಳ ಹೆಸರುಗಳೇ ಸಾಮಾನ್ಯ ಕೆಲವು ನಾಟಕಗಳಲ್ಲಿ ಪ್ರಾಣಿಗಳು ಪಕ್ಷಿಗಳು ನೃತ್ಯಮೇಳ; ಆದುದರಿಂದಲೇ ಅವುಗಳಿಗೆ `ದಿ ಫ್ರಾಗ್ `ದಿ ಬಡ್ರ್ಸ್ ಮೊದಲಾದ ಹೆಸರುಗಳು.

ಕ್ರಿ,ಪೂ.413ರಲ್ಲಿ ಅಥೆನ್ಸ್ ಪೆಲಿಪೊನೀಷಿಯನ್ ಯುದ್ಧದಲ್ಲಿ ಸೋತು ಪೇಜೋವಧೆಯಲ್ಲಿ ಅನುಭವಿಸಿತು. ಈ ಕಾಲದನಂತರ ಅದಿಸ್ಟಾಫನೀಸ್ ಬರೆದ ನಾಟಕಗಳಲ್ಲಿ ಹಿಂದಿನ ಲವಲವಿಕೆ,ಚೈತನ್ಯಗಳಲ್ಲಿ, ಫ್ವಾಂಟಿಸಿಯ ಪ್ರಾಧಾನ್ಯವಿಲ್ಲ. ಗ್ರೀಕ್ ನಾಟಕದ ಮಹಾಯುಗಕ್ಕೆ ತೆರೆ ಬೀಳುತ್ತಿರುವುದು ಸ್ಪಷ್ಟವಾಗಿದೆ.

ಇವರ ಮುಂಚಿನ ನಾಟಕಗಳು ಅದ್ಭುತ ಮನರಂಜನೆ ನೀಡುತ್ತವೆ ಆದಿಸ್ಟಾಫನೀಸನ ಹಾಸ್ಯ ಯಾವಾಗಲೂ ಸದಭಿರುಚಿಯದು ಎಂದು ಹೇಳುವಂತಿಲ್ಲ. ನಮಗೆ ಅಸಾಧ್ಯ ಎನ್ನಿಸುವ, ತೀರ ಒರಟು ಎನ್ನಿಸುವ ಮಾತುಗಳೂ ಉಂಟು. ದೈಹಿಕ ಚಟುವಟಿಕೆಗಳನ್ನು ಆಧರಿಸಿದ ಹಾಸ್ಯವೂ ಉಂಟು.

ಅರಿಸ್ಟಾಫ್‍ನೀಸ್ ಫ್ಯಾಂಟಸಿಯನ್ನು ದೃಷ್ಟಿಗೆ ರಂಜಕವಾಗಿ ಬಳಸುತ್ತಾನೆ ಒಂದು ಅಸಂಬದ್ಧ ಕಲ್ಪನೆಯನ್ನು (ಉದಾ ಭೂಮಿಗೂ ಸ್ವರ್ಗಕ್ಕೂ ನಡುವೆ ಗೋಡೆಯನ್ನು ಕಟ್ಟುವುದು) ಅದು ತರ್ಕಬದ್ಧ ಎನ್ನುವಂತೆ ಬಳಸಬಲ್ಲ. ತನ್ನ ಹಾಸ್ಯನಾಟಕಗಳಲ್ಲಿ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ. ಅವನು ತನ್ನನ್ನು `ಡಿಸ್ಕಲಾಯ್ (ಉಪಾಧ್ಯಾಯ) ಎಂದು ಕರೆದುಕೊಳ್ಳುತ್ತಾನೆ. ತನ್ನ ನಗರದ ಆಡಳಿತದಲ್ಲಿ, ಧೋರಣೆಯಲ್ಲಿ ಕಂಡ ಸಣ್ಣತನವನ್ನು, ದ್ವೇಷ ಅಸೂಯೆಗಳನ್ನು ಎತ್ತಿ ತೋರಿಸುತ್ತಾನೆ. ಶಾಂತಿಗಾಗಿ ಹಂಬಲಿಸುತ್ತಾನೆ.

ಯೂರೋಪಿನ ಸಾಹಿತ್ಯದ ಮೇಲೆ ಮಾತ್ರವಲ್ಲ, ಜಗತ್ತಿನ ಹಲವು ದೇಶಗಳ ಸಾಹಿತ್ಯಗಳ ಮೇಲೆ ಪ್ರಾಚೀನ ಗ್ರೀಕ್ ನಾಟಕವು ಪ್ರಭಾವ ಬೀರಿದೆ. ಯೂರೋಪ್ ಮತ್ತು ಅಮೆರಿಕಗಳ ನಾಟಕಕಾರರು ಮತ್ತೆ ಮತ್ತೆ ಪ್ರಾಚೀನ ಗ್ರೀಕ್ ನಾಟಕಗಳು, ಅವುಗಳಲ್ಲಿ ವ್ಯಕ್ತವಾದ ಜೀವನ ಪರಾಮರ್ಶೆ, ಇವುಗಳತ್ತ ತಿರುಗುತ್ತಾರೆ. ಕನ್ನಡ ಸಾಹಿತ್ಯದ ನವೋದಯದ ಪ್ರಾರಂಭದಲ್ಲಿ ಆಚಾರ್ಯ `ಶ್ರೀ ಯವರು ಈಸ್ಟಿಲಸನ `ಪಾರಸಿಕರು ನಾಟಕವನ್ನೇ ಅನುವಾದಿಸಿದರು. `ಅಶ್ವತ್ಥಾಮ ನಾಟಕಕ್ಕೆ ಸಫೋಕ್ನಿಸನ `ಅಯಾಸ್ ನಾಟಕವನ್ನು ಆಧಾರ ಮಾಡಿಕೊಂಡರು. ಪ್ರಾಚೀನ ಗ್ರೀಸ್‍ನ ಶ್ರೇಷ್ಠ ನಾಟಕಗಳು ಮತ್ತೆ ಮತ್ತೆ ಕನ್ನಡಕ್ಕೆ ಅನುವಾದವಾಗುತ್ತಲೇ ಇದೆ. 
											    (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ